ಉದಯಸಿಂಹ: 1205-49. ಕೀರ್ತಿಪಾಲನಿಂದ ಸ್ಥಾಪಿತವಾದ ಜಾಬಾಲಪುರದ ಚಹಮಾನ ರಾಜಪುತ್ರ ಸಂತತಿಯ ರಾಜರಲ್ಲಿ ಅತ್ಯಂತ ಪ್ರಖ್ಯಾತನಾದವ. ತಂದೆ ಸಮರಸಿಂಹನ ಮರಣಾನಂತರ 1205ರಲ್ಲಿ ರಾಜನಾದ. ಜಾಲಾರ್ ಈತನ ರಾಜಧಾನಿ. ಉದಯಸಿಂಹ ತನ್ನ ಅಧಿಕಾರವನ್ನು ನಾಥುಲ, ಮಾಂಡವ್ಯಪುರ, ಸೂರಚಂದ, ಖೇಡ, ರತ್ನಪುರ, ಸತ್ಯಪುರ ಮುಂತಾದ ಪ್ರದೇಶಗಳ ಮೇಲೆ ಸ್ಥಾಪಿಸಿದ. ಈತನ ರಾಜ್ಯ ಮಂದರ್ನಿಂದ ಸಾಂಚೊರ್ವರೆಗೂ ಮಲ್ಲಿನಿಯಿಂದ ಗದ್ವಾರ್ವರೆಗೂ ವಿಸ್ತರಿಸಿತ್ತು. ಈತ ಲಟದ ಚಹಮಾನ ರಾಜನಾದ ಸಿಂಧು ರಾಜನನ್ನು ಸೋಲಿಸಿದ. 1211ರಿಂದ 1216ರ ವರೆಗೆ ಅಲ್ತಮಷ್ ಉದಯಸಿಂಹನ ರಾಜ್ಯವನ್ನೂ ರಾಜಧಾನಿಯಾದ ಜಾಲಾರ್ ಪಟ್ಟಣವನ್ನೂ ಮುತ್ತಿದ. ಉದಯಸಿಂಹ ಸೋತರೂ ಆತನ ಪರಾಕ್ರಮಕ್ಕೆ ಮೆಚ್ಚಿ ರಾಜ್ಯವನ್ನು ಅಲ್ತಮಷ್ ಅವನಿಗೆ ಹಿಂದಕ್ಕೆ ಕೊಟ್ಟ. ಅನಂತರ ಗುಜರಾತಿನ ವೀರಮಾದೇವನೊಡನೆ ಸೇರಿ ಮಹಮದೀಯರ ಸೈನ್ಯವನ್ನು ಸೋಲಿಸಿ ಹಿಂತಿರುಗಿಸಿದ. ಉದಯಸಿಂಹ ಹಿಂದೂಶಾಸ್ತ್ರಗಳಲ್ಲಿ ವಿದ್ವಾಂಸನಾಗಿದ್ದ. ಇವನ ಮರಣಾನಂತರ ಮಗನಾದ ಚಾಚಿಗ ಪಟ್ಟಕ್ಕೆ ಬಂದ.	(ಜಿ.ಆರ್.ಆರ್.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ